Jai Bhim movie -ರೋಚಕ ಸಿನಿಮಾ ʼಜೈಭೀಮ್ʼ ಹೇಗಿದೆ ಗೊತ್ತಾ?
ಹಿಂದಿ ಮತ್ತು ಕನ್ನಡದಲ್ಲೂ ಡಬ್ ಆಗಿ ಮೊನ್ನೆ ತಾನೇ ಬಿಡುಗಡೆಯಾದ ತಮಿಳು ಸಿನೆಮಾ “ಜೈಭೀಮ್” ಕುರಿತು ಫೇಸ್‌ಬುಕ್‌ನಲ್ಲಿ ಅಷ್ಟೊಂದು ಮೆಚ್ಚುಗೆ ಬಂದಿದ್ದನ್ನು ನೋಡಿ, (ಬಹಳಷ್ಟು ಪತ್ರಿಕೆಗಳಲ್ಲಿ ಬಂದ ಜೈಕಾರದ ವಿಮರ್ಶೆಗಳನ್ನೂ ನೋಡಿ) ನಾನೂ ಅದರೆದುರು ಕೂತೆ.
ನೋಡಿ, ತುಸು ಹೊತ್ತು ಮಂಕಾಗಿ ಕೂತೆ.-Jai Bhim movie
ಇಂಥದ್ದೊಂದು ಸಿನೆಮಾವನ್ನು ನೋಡಿ ತುಂಬ ವರ್ಷಗಳೇ ಆಗಿದ್ದವು;
ನಮ್ಮಲ್ಲಿ ಆಳವಾಗಿ ಬೇರೂರಿರುವ ಜಾತಿ ಪದ್ಧತಿ, ಮೇಲುವರ್ಗದ ಅಟ್ಟಹಾಸ, ಪೊಲೀಸರ ಪೈಶಾಚಿಕ ವರ್ತನೆ, ಅಧಿಕಾರಿಗಳ ಮಸಲತ್ತು ಎಲ್ಲವನ್ನೂ ತುಂಬ ಪರಿಣಾಮಕಾರಿಯಾಗಿ, (ಅದರಲ್ಲೂ ಲಾಕಪ್ ಕ್ರೌರ್ಯವನ್ನು ತಲೆಚಿಟ್ಟು ಹಿಡಿಸುವಷ್ಟು ಕ್ರೂರವಾಗಿ) ಸಿನೆಮಾದಲ್ಲಿ ತೋರಿಸುತ್ತಾರಲ್ಲ.
ಅದು ಅಚ್ಚರಿ.
ಅದಕ್ಕಿಂತ ದೊಡ್ಡ ಅಚ್ಚರಿ ಏನೆಂದರೆ ಕಳೆದ ಏಪ್ರಿಲ್‌ನಲ್ಲಿ ಚಿತ್ರಕಥೆ ತಯಾರಾಗಿ, ಈ ಲಾಕ್‌ಡೌನ್ ರಗಳೆಗಳ ನಡುವೆಯೂ ಶೂಟಿಂಗ್, ಎಡಿಟಿಂಗ್ ಎಲ್ಲ ಪೂರ್ತಿಗೊಳಿಸಿ ಬಿಡುಗಡೆ ಮಾಡಿದ್ದು ಒಂದು ಸಾಧನೆ.
25 ವರ್ಷಗಳ ಹಿಂದಿನ ನೈಜ ಘಟನೆಗೆ ಮಸಾಲೆ ಸೇರಿಸಿ, ಕೋರ್ಟ್‌ರೂಮ್ ದೃಶ್ಯಗಳನ್ನು ಥ್ರಿಲ್ಲಿಂಗ್ ಮಾಡಿ, ಆರಂಭದಿಂದ ತುದಿಯವರೆಗೂ ವೀಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತಾರಲ್ಲ, ಅದು ಶ್ಲಾಘನೀಯ.
ನೇರವಾಗಿ ನಡೆದಿರಬಹುದಾದ ಘಟನಾವಳಿಗಳನ್ನು ಅದೆಷ್ಟು ಅಚ್ಚುಕಟ್ಟಾಗಿ ಫ್ಲ್ಯಾಶ್ ಬ್ಯಾಕ್ ದೃಶ್ಯಗಳ ಮೂಲಕ ಹೆಣೆಯುತ್ತಾರಲ್ಲ; ಆ ನಿರ್ದೇಶಕರ ಕೈಚಳಕಕ್ಕೆ ಹ್ಯಾಟ್ಸಾಫ್.
ಹಳ್ಳಿಯ ಗುಡಿಸಲಿನ ಸೆಟ್‌ನಲ್ಲಿ ನೆರೆದ ಅಷ್ಟೊಂದು ಜನರು, ಎಲ್ಲ ವಯಸ್ಸಿನವರೂ ಅಷ್ಟೊಂದು ಚೆನ್ನಾಗಿ ನಟಿಸುತ್ತಾರಲ್ಲ, ಅದು ಅಮೋಘ.
ನಿರ್ಮಾಪಕನಾಗಿ ಲಾಯರ್ ಆಗಿ ನಟಿಸಿದ ಸೂರ್ಯ (Suriya) ಈ ಸಿನೆಮಾ ಬಿಡುಗಡೆಯಾಗುತ್ತಲೇ ದಮನಿತರ ಕ್ಷೇಮಾಭಿವೃದ್ಧಿಗೆಂದು “ಪಳಂಗುಡಿ ಇರುಳರ್ ಟ್ರಸ್ಟ್”ಗೆ ಅಂತ ಒಂದು ಕೋಟಿ ರೂಪಾಯಿ ನೀಡಿದ್ದೂ ಮೆಚ್ಚಬೇಕಾದದ್ದೇ.
ಕನ್ನಡದಲ್ಲಿ ಯಾಕೆ ಇಂಥ ಸಿನೆಮಾಗಳು ಬರ್ತಾ ಇಲ್ಲ ಅಂತ ಮಿತ್ರ ಸಂತೋಷ ಗುಡ್ಡಿಯಂಗಡಿ ಬಹಳ ಖಾರವಾಗಿ ಬರೆದಿದ್ದಾರೆ. ನನ್ನಂಥವರು ಕನ್ನಡ ಸಿನೆಮಾಗಳನ್ನು ನೋಡುವುದನ್ನೇ ಬಿಟ್ಟಿದ್ದಕ್ಕೆ ಅವರು ಚಂದದ ಕಾರಣಗಳನ್ನು ಕೊಟ್ಟಿದ್ದಾರೆ.
ಸಿನೆಮಾದ ಹಿಂದಿರುವ ತತ್ವಮೀಮಾಂಸೆಗಳನ್ನು ಚಿತ್ರಪ್ರಿಯ Puttaswamy K ವಿಶದವಾಗಿ ಚಿತ್ರಿಸಿದ್ದಾರೆ. ಅಷ್ಟು ಆಳವಾದ ವಿಶ್ಲೇಷಣೆ,
ಕ್ಷೇತ್ರಪರಿಣತಿ ನನಗಂತೂ ಇಲ್ಲ. ಅಧ್ಯಯನವೇ ಇಲ್ಲವಲ್ಲ!
ಮಕ್ಕಳು ಮತ್ತು ನನ್ನಂಥ ಅಳ್ಳೆದೆಯವರು ಪೊಲೀಸರ ಈ ಪಾಟಿ ಕ್ರೌರ್ಯವನ್ನು ನೋಡಬಾರದೆಂದೇ “ಜೈಭೀಮ್” ಚಿತ್ರಕ್ಕೆ A ಸರ್ಟಿಫಿಕೇಟ್ ನೀಡಲಾಗಿದೆಯಂತೆ. ನಾನಾಗಿದ್ದರೆ ಅರ್ಧಕ್ಕರ್ಧ ಕಟ್ ಮಾಡಿ ಎನ್ನುತ್ತಿದ್ದೆ.
ತಮಿಳು ಸಿನೆಮಾ ಕುರಿತಂತೆ ನಾನು ಮಹಾ ಅಜ್ಞಾನಿ.
25 ವರ್ಷಗಳ ಹಿಂದೆ ʼಬಾಂಬೆʼ ಹೆಸರಿನ ಸಿನೆಮಾ ನೋಡಲೆಂದು ನಾವಿಬ್ಬರೂ ಅವಸರದಲ್ಲಿ ಓಡೋಡಿ ಊರ್ವಶಿ ಥಿಯೆಟರ್‌ನಲ್ಲಿ ಹೊಕ್ಕು ಕತ್ತಲಲ್ಲಿ ದಣಿದು ಕೂತು- ಚಿತ್ರ ಆರಂಭ ಆದ ಮೇಲೆ ಗೊತ್ತಾಗಿತ್ತು,
ಅದು ತಮಿಳು ಸಿನೆಮಾ ಅಂತ. ಭಾಷೆ ಅರ್ಥವಾಗದೆ ತೂಕಡಿಸಿ ಎದ್ದು ಬಂದು ಆಮೇಲೆ ಮತ್ತೊಂದು ದಿನ ಹಿಂದಿ ಭಾಷೆಯಲ್ಲಿ ʼಬಾಂಬೆʼ ನೋಡಿದ್ದೆವು.
ಅದು ಬಿಟ್ಟರೆ ಬೇರೆ ತಮಿಳು ಸಿನೆಮಾವನ್ನು ನೋಡಿರಲಿಲ್ಲ.
ಈಚೆಗಷ್ಟೇ ಕನ್ನಡದ ರಿಯಲ್ ಹೀರೊ ಕ್ಯಾಪ್ಟನ್ ಗೋಪಿನಾಥರ ಜೀವನ ಚರಿತ್ರೆಯನ್ನು ಆಧರಿಸಿದ ತಮಿಳು ಸಿನೆಮಾವನ್ನು ನೋಡಿದೆ.
ಅದು ಕನ್ನಡದ್ದೇ ಮೂಲ ಸಿನೆಮಾ ಎಂಬಷ್ಟು ಚೆನ್ನಾಗಿ ಡಬ್ ಮಾಡಿದ್ದರು (ಜೊತೆಗೆ ಅಲ್ಲಲ್ಲಿ ಕನ್ನಡದ್ದೇ ರಸ್ತೆಫಲಕಗಳೂ ಇದ್ದವು).
ಈಗಿನ ಈ “ಜೈಭೀಮ್” ಕೂಡ ನ್ಯಾಯಾಧೀಶರಾಗಿ ನಿವೃತ್ತರಾದ ಪ್ರಸಿದ್ಧ ವಕೀಲ ಕೆ. ಚಂದ್ರು ಅವರ ಜೀವನ ಕಥೆಯನ್ನು ಆಧರಿಸಿದೆ.
ಮುಖ್ಯ ಕತೆ ಏನೆಂದರೆ, ನಮ್ಮ ದೇಶದ ದುರ್ಬಲ, ನಿರಕ್ಷರಿ, ನಿಸರ್ಗಸ್ನೇಹಿ, ಮೂಲವಾಸಿಗಳ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂಬುದೇ ಇಲ್ಲ.
ರಾಜಕಾರಣಿಗಳ ಅಮಾನವೀಯ ಮಸಲತ್ತುಗಳಿಗೆ, ಸಮವಸ್ತ್ರಧಾರಿಗಳ ಕ್ರೌರ್ಯಕ್ಕೆ ಕೊನೆ ಎಂಬುದಿಲ್ಲ.
ಒಂದುವೇಳೆ ಪೊಲೀಸ್ ದೌರ್ಜನ್ಯಕ್ಕೆ ಕೊನೆ ಎಂಬುದು ಬಂದರೂ ಈ ಸಿನೆಮಾ ನಿರ್ದೇಶಕರು ಚಿತ್ರಿಸುವ ದೌರ್ಜನ್ಯಕ್ಕೆ ಎಲ್ಲಿದೆ ಅಂತ್ಯ?
https://en.wikipedia.org/wiki/Jai_Bhim_(film)
