
Eshwarappa
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ವಿಪಕ್ಷಗಳ ತೀವ್ರ ಪ್ರತಿಭಟನೆ, ಬಿಜೆಪಿ ಹೈಕಮಾಂಡ್ ಬೇಸರ.
ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮೇರೆಗೆ ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತಿಲ್ಲ, ಸುಖಾಸುಮ್ಮನೆ ನನ್ನ ಮೇಲೆ ಆರೋಪವನ್ನು ಮಾಡಲಾಗಿದೆ. ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ.
ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬುಧವಾರದ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಖಡಕ್ ಆಗಿ ಹೇಳಿದ್ದರು.
ಒಂದು ದಿನದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಶಿವಮೊಗ್ಗದಲ್ಲಿ ಗುರುವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಶುಕ್ರವಾರ ಸಂಜೆ ರಾಜೀನಾಮೆ ನೀಡುವುದಾಗಿ ಮಾಹಿತಿ ನೀಡಿದ್ದರು.

ಶಿವಮೊಗ್ಗದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, “ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ನಮ್ಮ ಮನೆಯದೇವತೆ ಚೌಡೇಶ್ವರಿ ನನಗೆ ತಕ್ಕ ಶಿಕ್ಷೆ ನೀಡಲಿ.
“ಪಕ್ಷದಲ್ಲಿ ಬೆಳೆಸಿದ ಹಿರಿಯರು, ನಾಯಕರಿಗೆ ಇರುಸು ಮುರಿಸು ಆಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆಯನ್ನು ಸಲ್ಲಿಸಲಿದ್ದೇನೆ. ಈತನಕ ಬೆಂಬಲ ನೀಡಿದವರಿಗೆ ಧನ್ಯವಾದಗಳು, ನನಗೆ ಸಂಪೂರ್ಣವಾದ ವಿಶ್ವಾಸವಿದೆ.
ನನ್ನದು ಒಂದೇ ಒಂದು ಪರ್ಸೆಂಟ್ ತಪ್ಪಿದ್ದರೆ ನನಗೆ ಭಗವಂತ ಶಿಕ್ಷೆ ಕೊಡಲಿ.
ಈ ಪ್ರಕರಣದ ಬಗ್ಗೆ ತನಿಖೆ ಮಾಡಬೇಕು ಎಂದು ಸಿಎಂಗೆ ಹೇಳಿದಾಗ ಸಂತೋಷದಿಂದ ತನಿಖೆ ಮಾಡಿಸುತ್ತೇನೆ,” ಎಂದಿದ್ದಾರೆ ಎಂದು ಹೇಳಿದರು.
ರಾಜಿನಾಮೆಗೆ ಕಾಂಗ್ರೆಸ್ ಒತ್ತಡ

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಕಳೆದ ಎರಡು ದಿನಗಳಿಂದ ಪ್ರತಿಭಟನೆಯು ನಡೆಸುತ್ತಿತ್ತು. ಬುಧವಾರ ರಾಜ್ಯಪಾಲರಿಗೂ ಮನವಿಯನ್ನು ಸಲ್ಲಿಸಿತ್ತು.
ಇನ್ನು ಗುರುವಾರ ಬೆಳಗ್ಗೆ ಸಿಎಂ ಬೊಮ್ಮಾಯಿ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಮುತ್ತಿಗೆ ಹಾಕುವ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದರು.
ಇದೇ ಏ.16, 17 ರಂದು ರಾಜ್ಯ ಬಿಜೆಪಿ ಕಾರ್ಯಕಾರ್ಯಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದಾರೆ.
ಈ ಸಮಯದಲ್ಲಿ ಈಶ್ವರಪ್ಪ ಪ್ರಕರಣದಿಂದ ತಮ್ಮ ಭೇಟಿಯ ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗಬಹುದು ಎಂಬ ಕಾರಣದಿಂದ ರಾಜೀನಾಮೆ ನೀಡುವಂತೆ ಸಲಹೆಯನ್ನು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಮಧ್ಯಾಹ್ನ ಈಶ್ವರಪ್ಪ ಅವರಿಗೆ ಫೋನ್ ಕರೆಯನ್ನು ಮಾಡಿ ತಿಳಿಸಿದ್ದರು.
ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಕಾರಣ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ವಾಟ್ಸಪ್ ಡೆತ್‌ನೋಟ್ ಸಂದೇಶ ಕಳುಹಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು.
ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇಂದು ಸಂಜೆ ಈಶ್ವರಪ್ಪ ನನಗೆ ಕರೆ ಮಾಡಿದ್ದರು.
ನನ್ನದು ಎಳ್ಳು ಕಾಳಷ್ಟೂ ಪಾತ್ರ ಇದರಲ್ಲಿ ಇಲ್ಲ. ರಾಜೀನಾಮೆ ನೀಡುತ್ತೇನೆ, ಮುಂದುವರಿದರೆ ಮುಜುಗರ ಆಗುತ್ತದೆ.
ಆದಷ್ಟು ಬೇಗ ತನಿಖೆ ಮುಗಿಸಿ ಸತ್ಯ ಹೊರ ಬರಲಿ ಎಂದು ಹೇಳಿದರು” ಎಂದು ಮುಖ್ಯಮಂತ್ರಿಗಳು ಮಾಹಿತಿಯನ್ನು ತಿಳಿಸಿದರು.
ಹೈಕಮಾಂಡ್ ಸೂಚನೆ
ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ನಾಯಕರ ಸೂಚನೆಯೇ ಕಾರಣ ಎಂಬ ಸುದ್ದಿಗಳು ಹರಡಿವೆ.
ಬುಧವಾರ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದ ಕೆ. ಎಸ್. ಈಶ್ವರಪ್ಪ, “ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಅಮೂಲಾಗ್ರ ತನಿಖೆಯು ನಡೆಸಬೇಕು.
ಆದರೆ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ” ಎಂದು ತಿಳಿಸಿದರು.
“ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಯ ಪ್ರಕರಣದಲ್ಲಿ ಡೆತ್ ನೋಟ್ ಹಿಡಿದು ಬಿಜೆಪಿ ಪಕ್ಷದವರು
ಪ್ರತಿಭಟನೆಯನ್ನು ನಡೆಸಿದ್ದರು. ಗೃಹ ಸಚಿವರಾಗಿದ್ದ ಕೆ. ಜೆ. ಜಾರ್ಜ್ ಅವರ ರಾಜೀನಾಮೆ ಪಡೆದರು ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತಿದೆ.
ಡಿವೈಎಸ್‌ಪಿ ಗಣಪತಿ ಅವರು ಡೆತ್‌ನೋಟ್ ಬರೆದಿಟ್ಟು ಸಹಿ ಹಾಕಿದ್ದರು. ಆದರೆ ಸಂತೋಷ್ ಪಾಟೀಲ್ ಪ್ರಕರಣ ಹಾಗಲ್ಲ” ಎಂದು ಹೇಳಿದ್ದಾರೆ.
ಆದರೆ ಗುರುವಾರ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿ ರಾಜೀನಾಮೆ ಪಡೆಯುವಂತೆ ಸೂಚನೆಯನ್ನು ನೀಡಿದ್ದಾರೆ.