Manipal Hospital
“ವೈದ್ಯೋ ನಾರಾಯಣೋ ಹರಿಃ” ಅಂತಾರೆ. ಅಂದರೆ “ಚಿಕಿತ್ಸೆ ನೀಡುವ ವೈದ್ಯರು ಜೀವ ನೀಡುವ ದೇವರಿಗೆ ಸಮ” ಅಂತ ಹಿಂದಿನಿಂದಲೂ ಗೌರವ ಕೊಡುತ್ತ ಬಂದಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರುವ ರೋಗಿಗೆ ಭರವಸೆ ತುಂಬಿ ಆತನ ಜೀವ ಉಳಿಸಲು ಪ್ರಯತ್ನ ಮಾಡಬೇಕಾಗಿರೋದು ವೈದ್ಯರ ಕರ್ತವ್ಯವಾಗಿದೆ.
ಆದರೆ ಹಣದಾಸೆಗೆ ಬೀಳುವ ಕೆಲ ಖಾಸಗಿ ಆಸ್ಪತ್ರೆಗಳು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿವೆ, ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಲ್ಲಿ ಘಟನೆಯೊಂದು ನಡೆದಿದೆ.
ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದ ಕೇರಳ ರಾಜ್ಯ ಮೂಲದ ಮಹಿಳೆಗೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿದ್ದಾರೆ.
7 ವರ್ಷಗಳ ಕಾಲ ಟ್ರೀಟ್‌ಮೆಂಟ್ ಕೊಟ್ಟರೂ ಆಕೆ ಕೊನೆಗೂ ಉಳಿಯಲಿಲ್ಲ ಇದೀಗ ಆಕೆಯ ಚಿಕಿತ್ಸೆ ವೆಚ್ಚ ಅಂತ ಆಸ್ಪತ್ರೆ ಹೇಳಿದ್ದು ಬರೋಬ್ಬರಿ ಸುಮಾರು 10 ಕೋಟಿ ಬಿಲ್! ಆಸ್ಪತ್ರೆ ದೌರ್ಜನ್ಯದ ವಿರುದ್ಧ ಸಿಡಿದೆದ್ದಿರುವ ಆಕೆಯ ಪತಿ, ಸಮರ ಸಾರಿದ್ದಾರೆ.
ಹಾಗಾದ್ರೆ ಆ ಖಾಸಗಿ ಆಸ್ಪತ್ರೆ ಯಾವುದು? ನಿಜಕ್ಕೂ ಆ ಹೆಣ್ಣು ಮಗಳಿಗೆ ಏನಾಗಿತ್ತು? ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ…
ಮಣಿಪಾಲ್ ಆಸ್ಪತ್ರೆ ಸೇರಿದ ಮಹಿಳೆ
ಈ ಪ್ರಕರಣದ ಸಂತ್ರಸ್ಥೆಯ ಹೆಸರು ಪೂನಂ ರಾಣಾ. 28 ವರ್ಷದ ಇವರು ಕೇರಳ ರಾಜ್ಯದವರು.
ಪತಿ ರೇಜಿಶ್ ನಾಯರ್ ಅವರ ಜೊತೆ ಚೆಂದದ ಸಂಸಾರ ನಡೆಸುತ್ತಾ ಇದ್ರು, 2015ರ ಅಕ್ಟೋಬರ್ 3ರಂದು ನಸುಕಿನ ವೇಳೆ ಹೊಟ್ಟೆ ನೋವಿನಿಂದಾಗಿ ಪೂನಂ ರಾಣಾಳನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಇಷ್ಟು ವರ್ಷಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲೇ ಆಕೆಗೆ ಚಿಕಿತ್ಸೆ ನೀಡಲಾಗಿದೆಯಂತೆ.
ಚಿಕಿತ್ಸೆ ಫಲಿಸದೇ ನಿಧನ
2015ರಿಂದಲೂ ಪೂನಂ ರಾಣಾಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಇದೀಗ ಪೂನಂ ರಾಣಾ ಅವರು ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾಗಿ ವೈದ್ಯರು ಈ ವಿಷಯ ತಿಳಿಸಿದ್ದಾರೆ.
10 ಕೋಟಿ ಆಸ್ಪತ್ರೆಯ ಬಿಲ್
ಇನ್ನು ಪೂನಂ ಪತಿ ರೇಜಿಶ್ ನಾಯರ್ ಅವರಿಗೆ ಆಸ್ಪತ್ರೆ ಸಿಬ್ಬಂದಿ 10 ಕೋಟಿ ರೂಪಾಯಿ ಬಿಲ್ ಆಗಿದೆ ಎಂದು ಹೇಳುತ್ತಿದೆ.
ಇದನ್ನು ನೋಡಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸಾಮಾನ್ಯ ಕುಟುಂಬಕ್ಕೆ ಸೇರಿದ ರೇಜಿಶ್, ಈಗಾಗಲೇ ಇಲ್ಲಿಯತನಕ ಪತ್ನಿ ಚಿಕಿತ್ಸೆಗೆ ಅಂತ ಸಾಲ ಸೋಲ ಮಾಡಿ ಹಣವು ಹೊಂದಿಸುತ್ತಾ ಇದ್ದರು.
ಇಲ್ಲಿಯವರೆಗೆ ಊರಿನಲ್ಲಿರುವ ಜಮೀನು ಮಾರಿ 2 ಕೋಟಿಯಷ್ಟು ವೆಚ್ಚ ಮಾಡಿದ್ದಾರೆ. ಇದೀಗ ಬಿಲ್ 10 ಕೋಟಿ ಆಗಿದೆ ಅಂತ ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದೆ.
ಪೂನಂ ಪತಿ ಆಕ್ರೋಶ
ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ತನ್ನ ಪತ್ನಿ ಸಾವನ್ನಪ್ಪಿದ್ದಾಳೆ ಅಂತ ರೇಜಿಶ್ ನಾಯರ್ ಆರೋಪ ಮಾಡಿದ್ದಾರೆ, ಆಕೆಯ ದೇಹಕ್ಕೆ ನಿರಂತರವಾಗಿ ರಾಸಾಯನಿಕ ವಿಷ ಸೇರಿಸಲಾಗುತ್ತಿತ್ತು ಎನ್ನುವ ಬಗ್ಗೆಯೂ ಅವರು ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.
ಬಹು ಅಂಗಾಂಗ ವೈಫಲ್ಯ
“ಕಿಬ್ಬೊಟ್ಟೆಯ ನೋವಿನಿಂದಾಗಿ, ಸಣ್ಣ ಕರುಳಿನಲ್ಲಿ ರಂಧ್ರವಿದೆ ಎಂದು ವೈದ್ಯರು ಈ ವಿಷಯ ತಿಳಿಸಿದ್ದರಿಂದ ಪೂನಂ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಯ ಪಡೆದುಕೊಂಡ ನಂತರ ಅವಳು ಕೊಂಚ ಸುಧಾರಿಸಿಕೊಂಡು, ನನ್ನೊಂದಿಗೆ ಮಾತನಾಡಿದ್ದಳು. ಆದರೆ ಎರಡು ದಿನಗಳಾದ ಮೇಲೆ ವೈದ್ಯರು ಆಕೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
ನನ್ನ ಪತ್ನಿಯನ್ನು ಮನೆಗೆ ಕೊಂಡೊಯ್ಯುವಂತೆ ನನಗೆ ಹೇಳಿದ್ದರು, ಇದಕ್ಕೆ ಒಪ್ಪದಿದ್ದಾಗ ಆಕೆಯ ಆರೋಗ್ಯ ಸುಧಾರಣೆಗಾಗಿ ಕೊಡಬೇಕಿದ್ದ ಔಷಧಿ ಕೊಡದೇ ನಿಲ್ಲಿಸಿದರು” ಅಂತ ರೇಜಿಶ್ ನಾಯರ್ ಆರೋಪಿಸಿದ್ದಾರೆ.
ಆಸ್ಪತ್ರೆ ಹೇಳಿದ್ದೇನು?
20ಕ್ಕಿಂತ ಹೆಚ್ಚು ವೈದ್ಯರು ಪೂನಂ ರಾಣಾ ಆರೋಗ್ಯದ ಬಗ್ಗೆ ನಿಗಾ ವಹಿಸಿದೆ ಎಂದು ಆಸ್ಪತ್ರೆ ಹೇಳುತ್ತಿದೆ.
ಅವರ ಕುಟುಂಬದಿಂದ ನಿರಂತರ ಅಸಹಕಾರದ ಹೊರತಾಗಿಯೂ ವೈದ್ಯಕೀಯ ತಂಡವು ಆಕೆಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ
ಆಸ್ಪತ್ರೆಯಿಂದ ದೌರ್ಜನ್ಯವಾಗಿದೆ ಅಂತ ಆರೋಪಿಸಿ ಮೃತ ಪೂನಂ ರಾಣಾ ಪತಿ ರೇಜಿಶ್ ನಾಯರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜೀವನ್ ಭಿಮಾನಗರ ಪೊಲೀಸ್ ಠಾಣೆಗೆ ಮಣಿಪಾಲ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾಗಿ ಸ್ಪಷ್ಟ ಪಡಿಸಿದ್ದಾರೆ.