ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದ ಎಚ್‌ಡಿಕೆ!-Kumaraswamy

Kumaraswamy

ಎಚ್.ಡಿ. ಕುಮಾರಸ್ವಾಮಿ-Kumaraswamy

ಕರ್ನಾಟಕ ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ವಿದ್ಯಮಾನಗಳು ರಾಜಕೀಯ ಪಕ್ಷಗಳಲ್ಲಿ ಬಹಳಷ್ಟು ಗೊಂದಲವನ್ನು ಹುಟ್ಟುಹಾಕಿದೆ.

ಮೇಲ್ನೋಟಕ್ಕೆ ರಾಜ್ಯದಲ್ಲಿ ಹೊತ್ತಿಕೊಂಡಿರುವ ಧರ್ಮದಂಗಲ್ ಬೆಂಕಿಯನ್ನು ಆರಿಸುವ ಬದಲಿಗೆ ಅದರಲ್ಲಿ ಚಳಿ ಕಾಯಿಸಿಕೊಳ್ಳಲು ರಾಜಕೀಯ ಪಕ್ಷಗಳ ನಾಯಕರು ಮುಗಿಬೀಳುತ್ತಿರುವುದು ತುಂಬಾ ಎದ್ದು ಕಾಣಿಸುತ್ತಿದೆ.

ಆಡಳಿತರೂಢ ಬಿಜೆಪಿ ಆಡಳಿತ ವೈಫಲ್ಯವನ್ನು ಜನತೆ ಮುಂದಿಟ್ಟು ಮತದಾರರನ್ನು ಸೆಳೆಯಲು ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಹೋರಾಟ ಮಾಡಿ ರೈತರನ್ನು ತಮ್ಮ ಬಗಲಿಗೆ ಹಾಕಿಕೊಳ್ಳುವ ತಂತ್ರ ಮಾಡಿದ್ದ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ವ್ಯೂಹ ರೆಡಿ ಮಾಡಿಕೊಂಡಿತ್ತು.

ಶಕ್ತಿ ಪ್ರದರ್ಶಿಸಿದ್ದ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರು ಮೇಕೆದಾಟು ಪಾದಯಾತ್ರೆಯನ್ನು ಮುನ್ನಲೆಗೆ ತರುವ ಮೂಲಕ ಕಾಂಗ್ರೆಸ್‌ನ ಶಕ್ತಿಪ್ರದರ್ಶನಕ್ಕೆ ವೇದಿಕೆಯನ್ನು ಸಜ್ಜು ಮಾಡಿದ್ದರು.

ಆ ನಂತರ ಸದನದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ವಿರೋಧಿಸಿ ಪ್ರತಿಭಟನೆಯು ನಡೆಸಿತು, ಆದರೂ ಕೂಡ ಇದರೆಡು ವಿಚಾರಗಳು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಇದಕ್ಕೆ ಕಾರಣ ಕೂಡ ಇದೆ, ಇವೆರಡು ವಿಚಾರದಲ್ಲಿಯೂ ಕಾಂಗ್ರೆಸ್ ಪಕ್ಷದ ನಡೆಯನ್ನು ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಟೀಕಿಸಿದರು.

ಹೀಗಾಗಿ ಕಾಂಗ್ರೆಸ್‌ಗೆ ಅಂದುಕೊಂಡಂತೆ ಯಾವುದೇ ರೀತಿಯ ಲಾಭವನ್ನು ತಂದುಕೊಡಲಿಲ್ಲ.

ಎಚ್‌ಡಿಕೆಯ ಆಲೋಚನೆ ಬೇರೆ  

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ತನ್ನದೇ ಆದ ಓಟ್ ಬ್ಯಾಂಕ್ ಇದೆ, ಅದನ್ನು ತಮ್ಮತ್ತ ಸೆಳೆಯುವುದು ಜೆಡಿಎಸ್‌ಗೆ ಬಹಳ ಕಷ್ಟವಾಗಿದೆ.

ಮತ್ತು ಕಾಂಗ್ರೆಸ್‌ಗೆ ಬೆನ್ನೆಲುಬಾಗಿರುವ, ಹಿಂದುಳಿದ, ಅಲ್ಪಸಂಖ್ಯಾತ, ರೈತರ ಮತಗಳನ್ನು ಸೆಳೆಯಬೇಕಾದರೆ ಕಾಂಗ್ರೆಸ್‌ನ ವಿಫಲತೆಯನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಬೇಕು.

ಆಗ ಮತದಾರರು ಅನ್ಯ ಮಾರ್ಗವಿಲ್ಲದೆ ಜೆಡಿಎಸ್‌ನತ್ತ ಬರುತ್ತಾರೆ ಎಂಬುದು ಕುಮಾರಸ್ವಾಮಿ ಅವರ ಒಳ ಆಲೋಚನೆಯಾಗಿದೆ.

ಅವರು ಕಳೆದ ಕೆಲವು ತಿಂಗಳಿನಿಂದ ಸರ್ಕಾರದ ವಿರುದ್ಧ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ ವೈಫಲ್ಯವನ್ನು ಟೀಕಿಸುತ್ತಾಬಂದಿದ್ದಾರೆ.

ಇದಾದ ನಂತರ ಧರ್ಮಕ್ಕೆ ಸಂಬಂಧಪಟ್ಟ ವಿದ್ಯಮಾನಗಳು ಆರಂಭ ಆದಾಗಲೂ ಕೂಡ ಒಂದಷ್ಟು ದಿನ ಮೌನವಾಗಿದ್ದುಕೊಂಡು ಎಲ್ಲವನ್ನೂ ಅಳೆದು ತೂಗಿ ಇದ್ದಕ್ಕಿದ್ದಂತೆಯೇ ಕಾಂಗ್ರೆಸ್ ಪಕ್ಷ  ಮತ್ತು ಬಿಜೆಪಿ ಪಕ್ಷ ವಿರುದ್ಧ ಹರಿಹಾಯ್ದರು.

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಜೆಡಿಎಸ್

ಇದು ಎಚ್.ಡಿ. ಕುಮಾರಸ್ವಾಮಿ ಅವರ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಎಂಬುದು ಸುಲಭವಾಗಿ ಅರ್ಥವಾಗುತ್ತದೆ.

ಅದಕ್ಕಿಂತ ಹೆಚ್ಚಾಗಿ ಇಲ್ಲಿಯವರೆಗೆ ಕುಮಾರಸ್ವಾಮಿ ಅವರು ಒಂದು ಸಿದ್ಧಾಂತಕ್ಕೆ ಗಟ್ಟಿಯಾಗಿ ನಿಂತ ಉದಾಹರಣೆಗಳಿಲ್ಲ, ಹೀಗಾಗಿ ಅವರನ್ನು ಬೆಂಬಲಿಸುವ ಸಮುದಾಯಕ್ಕೆ ಸಣ್ಣಗಿನ ಭಯವಂತು ಇದ್ದೇ ಇದೆ.

ಒಂದು ವೇಳೆ ತಾವು ಬೆಂಬಲಿಸುತ್ತಾ ಬಂದಿರುವ ಪಕ್ಷ ನಮ್ಮ ಪರವಾಗಿ ನಿಲ್ಲಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಕಡೆಗೆ ಒಲವು ತೋರಿದರೂ ಚುನಾವಣೆ ನಂತರ ಜೆಡಿಎಸ್ ನಿರ್ಧಾರಗಳು ಹೇಗಿರಲಿವೆ ಎಂಬುದನ್ನು ಖಡಾಖಂಡಿತವಾಗಿ ಈಗಲೇ ಹೇಳಲು ಆಗುವುದಿಲ್ಲ.

ಇದೀಗ ರಾಷ್ಟ್ರೀಯ ಪಕ್ಷಗಳ ವಿರುದ್ಧ ರಣಕಹಳೆ ಊದಿರುವ ಜೆಡಿಎಸ್, ನಾಳೆ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲವನ್ನು ನೀಡಬಹುದು.

ಲಾಭ ತರುತ್ತಾ ಜನತಾ ಜಲಧಾರೆ ಯಾತ್ರೆ?

ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದರೂ ಪೂರ್ಣಗೊಳಿಸಿದ ಉದಾಹರಣೆಗಳಿಲ್ಲ, ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳ ನಡುವಿನ ಜೆಡಿಎಸ್ ಸಂಬಂಧ ಬಿರುಕು ಬಿಟ್ಟಿದೆ.

ಎರಡು ಪಕ್ಷಗಳು ಕೂಡ ಜೆಡಿಎಸ್‍ನಿಂದ ನಾಯಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದು, ಈಗಾಗಲೇ ಹಿಂದೂ ಸಂಘಟನೆಗಳ ವಿರುದ್ಧ ಗುಡುಗಿ, ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ವೈಫಲ್ಯವನ್ನು ಬೀದಿಗೆಳೆದು ಸದ್ಯ ರೈತರ ಮನಸೆಳೆಯಲು ಮುಂದಾಗಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಜನತಾ ಜಲಧಾರೆ ಯಾತ್ರೆ ಆರಂಭಿಸುತ್ತಿದ್ದಾರೆ.

ಇದು ಇವರಿಗೆ ಯಾವ ರೀತಿಯ ಯಶಸ್ಸು ತಂದುಕೊಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಯಾರಿಗೆ ಯಾವುದು ಗೆಲುವಿನ ಅಸ್ತ್ರ?

ದಳಪತಿಗಳೆಲ್ಲ ಮೌನಕ್ಕೆ ಶರಣಾಗಿರುವಾಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒಬ್ಬರೇ ಅಖಾಡಕ್ಕಿಳಿದು ಹೋರಾಟ ಪ್ರಾರಂಭಿಸಿದ್ದಾರೆ, ಆ ಮೂಲಕ ಹಿಂದೂಪರ ಸಂಘಟನೆಗಳ ವಿರೋಧವನ್ನು ಕಟ್ಟಿಕೊಂಡಿದ್ದಾರೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಪರವಾಗಿ ಮೆದುಧೋರಣೆ ತಾಳಿತ್ತು, ಅದು ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಯಿತು.

ಈ ಬಾರಿಯು ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧದ ಯುದ್ಧಕ್ಕೆ ಸಿದ್ಧವಾಗಿದ್ದು, ಈಗಾಗಲೇ ರಣಕಹಳೆಯನ್ನು ಮೊಳಗಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳನ್ನು ಬದಿಗೆ ಸರಿಸಿ ಬಹುಮತದಿಂದ ಅಧಿಕಾರ ಹಿಡಿಯುವ ಆತ್ಮವಿಶ್ವಾಸದಲ್ಲಿದ್ದಾರೆ, ಅಭಿವೃದ್ಧಿ ವಿಚಾರಕ್ಕಿಂತ ಭಾವನಾತ್ಮಕ ವಿಚಾರಗಳು ಮೇಳೈಸುತ್ತಿರುವಾಗ ಯಾರಿಗೆ ಯಾವುದು ಗೆಲುವಿನ ಅಸ್ತ್ರವಾಗುತ್ತದೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯೋಗ್ಯತೆ ಇಲ್ಲ!-Sidramaiah

https://jcs.skillindiajobs.com/

Social Share

Leave a Reply

Your email address will not be published. Required fields are marked *